ಅರಗಿಸುವದೊಳೆ

	ಆಹಾರದೊಡನೆ ಜಠರವನ್ನು ಸೇರುವ ಮಾಂಸ, ಮೊಟ್ಟೆಗಳು, ಬೀಜಗಳಂತಹವಲ್ಲಿನ ಪ್ರೊಟೀನುಗಳನ್ನು ಅರಗಿಸುವ ಜಠರರಸದಲ್ಲಿರುವ ಬಲವಾದ ದೊಳೆ (ಕಿಣ್ವ; ಎಂಜೈಮು). ತೀರ ಸ್ವಲ್ಪ ಪ್ರಮಾಣದಲ್ಲಿ ಹಾಕಿದರೂ ಸಾಮಾನ್ಯವಾಗಿ ಅವು ಬದಲಾಗದೆ ಇತರ ವಸ್ತುಗಳ ನಡುವೆ ಜೀವರಾಸಾಯನಿಕ ಕೆಲಸಗಳನ್ನು ವೇಗಗೊಳಿಸುವ ಹೆರಲಯಕಗಳೇ (ಕೆಟಲಿಸ್ಟ್) ದೊಳೆಗಳು. ಬದುಕಿರುವ ಪ್ರಾಣಿಗಳ ಊತಕದಲ್ಲಿ (ಟಿಷ್ಯೂಸ್) ತಯಾರಾಗುವ ಇವು ನಿಸರ್ಗದ ರಸಾಯನವಿಜ್ಞಾನಿಗಳು ಎನ್ನಬಹುದು. ಇವು ಕೃತಕವಾಗಿ ತಯಾರಾಗಿಲ್ಲ. ಇವಿಲ್ಲದಿದ್ದರೆ ತೀರ ನಿಧಾನವಾಗುವಂಥ ಅನೇಕ ರಾಸಾಯನಿಕ ಕೆಲಸಗಳಿಗಾಗಿ ಎಲ್ಲ ಜೀವಕಣಗಳೂ ಇವನ್ನು ನೆಚ್ಚಿವೆ.

	ಅಲ್ಬುಮಿನ್ನುಗಳನ್ನು ಅರದೊಳೆ (ಪೆಪ್ಸಿನ್) ಸರಳರೂಪಕ್ಕೆ ಬದಲಿಸುವುದನ್ನು ತೋರಿ, ಗುರುತಿಸಿ, ಹೆಸರಿಸಿದವ ಜರ್ಮನಿಯ ಥಿಯೊಡೋರ್ ಷ್ಪಾನ್ (1835). ಅಮೆರಿಕದ ಜಾನ್ ನಾರ್ತ್‍ರಾಪ್ ಇದನ್ನು ಹರಳುಗಳಾಗಿ ಪಡೆದು ಪ್ರೊಟೀನೆಂದು ತೋರಿಸಲು ಇನ್ನೊಂದು ಶತಮಾನ (1930) ಹಿಡಿಯಿತು.

	ಜಠರ ಒಳವರಿ ಪೊರೆಯ ಮುಖ್ಯ ಜೀವಕಣಗಳಲ್ಲಿ ಅರದೊಳೆ, ಜಡರೂಪವಾದ ಅರದೊಳೆಜನಕವಾಗಿ ತಯಾರಾಗಿ ಕೂಡಿರುತ್ತದೆ. ಅರದೊಳೆಜನಕ ಜಠರದೊಳಕ್ಕೆ ಸುರಿದುಬಂದಾಗ ಅಲ್ಲಿನ ಜಠರದ ಆಮ್ಲಕ ರಸದೊಂದಿಗೆ ಕೂಡಿದ ಕೂಡಲೇ ಇನ್ನಷ್ಟು ಚುರುಕು. ಅರದೊಳೆಯ ಅರಗಿಸುವ ಒಳ ಪರಿಸರದ ಆಮ್ಲತೆಗೆ ಅನುಗುಣವಾಗಿರುವುದು. ಜಠರದ ಸಹಜವಾದ ಆಮ್ಲತೆ (ಕ್ಷಾರಾಮ್ಲಾಂಕ ಠಿಊ :1.5-2.5) ಮಟ್ಟದಲ್ಲಿ ಬಲುಬೇಗ ಅರಗಿಸುತ್ತದೆ. ಕ್ಷಾರದ ದ್ರಾವಣದಲ್ಲಿ ಅಷ್ಟೇ ಬೇಗನೆ ಹಾಳಾಗುತ್ತದೆ.

	ಪ್ರೊಟೀನುಗಳಲ್ಲಿ ಸಾಮಾನ್ಯವಾಗಿ ಸುಮಾರು (20) ಬೇರೆಬೇರೆ ಬಗೆಯ ಅಮೈನೊಆಮ್ಲಗಳು ಒಂದುಗೂಡಿರುತ್ತವೆ. ಇವುಗಳಲ್ಲಿನ ಕೆಲವು ಜೋಡಿ ಅಮೈನೊಆಮ್ಲಗಳ ನಡುವಣ ಕೊಂಡಿಗಳನ್ನು ಮಾತ್ರ ಅರದೊಳೆ ಬಿಡಿಸುತ್ತದೆ. ಜಠರದಲ್ಲಿ ಬಿಡಿ ಹೈಡ್ರೊಕ್ಲೋರಿಕ್‍ಆಮ್ಲ ಇರುವ ತನಕ ಇದರಿಂದ ಪ್ರೊಟೀನು ಒಡೆದು ಪ್ರೊಟಿಯೇಸು, ಪೆಪ್ಟೋನುಗಳೆಂಬ ಚೂರುಗಳಾಗುತ್ತವೆ. ಈ ಚೂರುಗಳು ಮೂಲ ಪ್ರೊಟೀನುಗಳಂತಲ್ಲ. ನೀರಿನಲ್ಲಿ ಕರಗುತ್ತವೆ. ಕೆಲವು ಪ್ರಾಣಿಗಳ ಪೊರೆಗಳಲ್ಲಿ ತೂರಿಹೋಗುತ್ತವೆ. ರಕ್ತಗತವಾಗಲು ಇವು ಇನ್ನೂ ಚೂರಾಗಿ ಒಡೆಯಬೇಕು. ಕೊನೆಗೆ ಕರುಳಲ್ಲಿ ಮತ್ತೆ ಚೂರು ಚೂರಾಗಿ ರಕ್ತಗತವಾಗುತ್ತವೆ. ಇದಕ್ಕೆ ಕಾರಣ ಮುಖ್ಯವಾಗಿ ಮಾಂಸಲಿಯ (ಪ್ಯಾಂಕ್ರಿಯಾಸ್) ದೊಳೆಗಳು. ಮೈಯ ಕಾವಿನಲ್ಲಿ ತಾಸಿನಲ್ಲಿ (2) ಲಕ್ಷ ಗ್ಯಾಲನ್ ಹಾಲನ್ನು ಹೆಪ್ಪುಗಟ್ಟಿಸಲು (ಅರಗಣೆಯ ಮೊದಲ ಹೆಜ್ಜೆ) ಒಂದೇ ಒಂದು ಔನ್ಸಿನಷ್ಟು ಅಚ್ಚ ಅರದೊಳೆ ಸಾಕು. ಇಲ್ಲವೆ ಅದೇ ಕಾಲದಲ್ಲಿ ಅದರ ಸಾವಿರಾರು ಪಾಲಿನಷ್ಟು ತೂಕದ ಮೊಟ್ಟೆಲೋಳೆಯಂಥ ಬೇರೆ ಪ್ರೊಟೀನುಗಳನ್ನು ಅರಗಿಸಬಲ್ಲುದೆಂದರೆ, ಅರದೊಳೆಯ ಅರಗಿಸುವ ಹೆಬ್ಬಲುಮೆ ಗೊತ್ತಾಗುತ್ತದೆ. ಅರದೊಳೆ ಕೂಡ ಪ್ರೊಟೀನೇ ಆಗಿದ್ದರೂ ಅದನ್ನು ತಾನೇ ಅರಗಿಸಿಕೊಳ್ಳದು. 

	ಬೇರೆ ದೊಳೆಗಳು, ಪ್ರೊಟೀನುಗಳ ಹಾಗೆ ಅರದೊಳೆಯ ದೊಡ್ಡ ಸಮ್ಮಿಶ್ರ ಅಣು. ಜಲಜನಕದ ಅಣುವಿನ ತೂಕ (1), ಅಡಿಗೆ ಉಪ್ಪಿನ ಅಣುವಿನ ತೂಕ (58) ಆಗಿದ್ದರೆ, ಅರದೊಳೆಜನಕದ್ದು (42,500). ಅರದೊಳೆಯ ಅಣು (35,000)ತೂಗುತ್ತದೆ. 

	ಮದ್ದಾಗಿ ಬಳಕೆಯಾಗುವ ಅರದೊಳೆ ಹಂದಿಗಳ ಜಠರಗಳಿಂದ ತಯಾರಾಗುವುದು. ಒಂದು ಜಠರದಲ್ಲಿ ಸುಮಾರು ಒಂದು ಗ್ರಾಮ್ ತೂಕದಷ್ಟಿರುವುದು. ದನಕರು, ಕುರಿಗಳಿಂದಲೂ ತೆಗೆಯಬಹುದು. ಹಳದಿ ಬೂದು ಬಣ್ಣದ ಪುಡಿ ಇಲ್ಲವೇ ನಸುಹಳದಿ ಬಣ್ಣದ, ಬೆಳಕು ಹಾಯಿಸದ ಹಗರಿನಂಥ ವಸ್ತುವಿದು. ಕೆಲಬಗೆಯ ಅಜೀರ್ಣಗಳಲ್ಲಿ ಇದರ ಕೊರೆ ಇರುವುದೆಂಬ ಭಾವನೆಯಿಂದ ಇದನ್ನು ಮದ್ದಾಗಿ ಕೊಡುವುದುಂಟು. ಇದಕ್ಕೆ ಆಧಾರವಿಲ್ಲ. ಏಕೆಂದರೆ, ಇಲ್ಲಿ ಕೊರೆಯಾಗುವುದು ಆಮ್ಲವೇ ಹೊರತು ಈ ದೊಳೆಯಲ್ಲ. ಸಾಕಷ್ಟು ಆಮ್ಲವನ್ನು ಸೇರಿಸಿದ ಕೂಡಲೇ ಪ್ರೊಟೀನುಗಳನ್ನು ಸುಲಭವಾಗಿ ಅರಗಿಸುತ್ತದೆ. ಆದರೆ ಹೈಡ್ರೊಕ್ಲೋರಿಕಾಮ್ಲವನ್ನು ಮಾತ್ರ ರೋಗಿಗೆ ಕೊಟ್ಟರೆ ಜಠರರಸದ ಸುರಿಕೆಯನ್ನೇ ತಗ್ಗಿಸುತ್ತದೆ. ಆದ್ದರಿಂದಲೇ ಆಮ್ಲದೊಂದಿಗೆ ಅರದೊಳೆಯನ್ನೂ ಸೇರಿಸುವುದು ವಾಡಿಕೆ. ಹದಗೊಳಿಸುವ ಮುಂಚೆ ಪ್ರಾಣಿಗಳ ತೊಗಲಿನ ಕೂದಲು, ಕಸರನ್ನು ತೆಗೆದುಹಾಕಲು ಕಚ್ಚ ಅರದೊಳೆಯನ್ನು ಚರ್ಮ ಹದಮಾಡುವವರು ಬಳಸುವರು. ಬೆಳ್ಳಿಯ ಸಂಯುಕ್ತವನ್ನು ಹಿಡಿದಿರುವ ಜೆಲಟೀನನ್ನು ಅರಗಿಸುವುದರಿಂದ, ಬಿಸಾಡಿದ ಹಳೆಯ ಚಲನಚಿತ್ರ ಸುರುಳಿಗಳಿಂದ ಬೆಳ್ಳಿಯನ್ನು ಮರಳಿ ಪಡೆಯಲೂ ಇದನ್ನು ಬಳಸುವುದುಂಟು. ಏಕಾಣುಜೀವಿಗಳು ಮತ್ತಿತರ ಜೀವಾಣುಗಳನ್ನು ಪ್ರಯೋಗಾಲಯದಲ್ಲಿ ಬೆಳೆಸಲು ಬರುವ ನಡುವರ್ತಿ ವಸ್ತುವಿನ ಮುಖ್ಯ ಭಾಗವಾದ ಪೆಪ್ಟೋನು (ಅರೆಬರೆ ಅರಗಿಸಿದ ಪ್ರೊಟೀನು) ತಯಾರಿಕೆ ಇದರ ಇನ್ನೊಂದು ಬಳಕೆ.
 (ನೋಡಿ- ಪಚನ)
 (ನೋಡಿ- ಪ್ರೋಟೀನುಗಳು)								
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ